ಕಣಶ್ಯ ಕವಿಗಳು : ಕಣಶ್ಯನ್ ಎಂಬ ಕುಟುಂಬ ಸಂಜ್ಞೆಯನ್ನುಳ್ಳ ಮೂವರು ಕವಿಗಳನ್ನು ಈ ಹೆಸರಿನಿಂದ ಕರೆಯುತ್ತಾರೆ. ಇವರ ಕೃತಿಗಳನ್ನು ಕಣಶ್ಯ ಕೃತಿಗಳೆನ್ನುತ್ತಾರೆ. ದ್ರಾವಿಡ ಸಂಘಾತಾಕ್ಷರ ನಿಬದ್ಧವಾಗಿರತಕ್ಕುದೆಂದು ನಿರ್ದೇಶಿತವಾದ ಜಾನಪದ ಗೀತೆಗಳು ಮಣಿಪ್ರವಾಳದ ಬೆಳೆವಣಿಗೆಯ ಪರಿಣಾಮವಾಗಿ ಆ ನಿಯಮವನ್ನು ಸಂಪುರ್ಣವಾಗಿ ಉಲ್ಲಂಘಿಸಿದುದಕ್ಕೆ ಈ ಕೃತಿಗಳು ಪ್ರತ್ಯಕ್ಷ ದೃಷ್ಟಾಂತಗಳಾಗಿವೆ. ಕಣಶ್ಯ ಕವಿಗಳು ಪಾಡ್ದನಗಳಿಗೆ ಮಣಿಪ್ರವಾಳದ ಸೊಬಗನ್ನು ಕೊಟ್ಟರು. ಅಲ್ಲದೆ ತಮ್ಮ ಕೃತಿಗಳಿಗೆ ವಸ್ತುವನ್ನು ತರಲು ಪುರಾಣಗಳ ಮೊರೆಹೊಕ್ಕರು. ಹಿಂದಿನ ಕಾಲದ ಮಣಿಪ್ರವಾಳ ಕವಿಗಳಿಗಿಂತಲೂ ಇವರು ಪ್ರೌಢಚಿತ್ತರೂ ತತ್ತ್ವಚಿಂತಕರೂ ಆಗಿದ್ದು ಮಹಾಭಾರತ, ಭಾಗವತ, ವಾಲ್ಮೀಕಿ ರಾಮಾಯಣ ಮೊದಲಾದ ಮಹತ್ತಾದ ಪುರಾಣಗ್ರಂಥಗಳನ್ನು ಉಪಜೀವಿಸಿ ಹಲವಾರು ಪ್ರೌಢ ಕೃತಿಗಳನ್ನು ರಚಿಸಿದ್ದಾರೆ.

ಇದುವರೆಗೆ ಸಿಕ್ಕಿರುವ ಕಣಶ್ಯ ಕೃತಿಗಳು ಮೂವರು ಕವಿಗಳಿಗೆ ಸೇರಿದವಾಗಿವೆ. ಅವರು ಮೂವರೂ ಒಂದೇ ಕುಟುಂಬದ ಸದಸ್ಯರೂ ಒಬ್ಬನೇ ತಂದೆಯ ಸಂತಾನ ಪರಂಪರೆಗೆ ಸೇರಿದವರೂ ಆಗಿದ್ದಾರೆ. ಇವರು ಜೀವಿಸಿದ್ದ ಕಾಲ ಹದಿನಾಲ್ಕನೆಯ ಶತಮಾನದ ಕೊನೆ ಹಾಗೂ ಹದಿನೈದನೆಯ ಶತಮಾನದ ಆದಿ ಎನ್ನಲಾಗಿದೆ. ಇವರಲ್ಲಿ ಮಾಧವ ಪಣಿಕ್ಕರ್ ಮತ್ತು ಶಂಕರ ಪಣಿಕ್ಕರ್ ಎಂಬುವರು ಮೂರನೆಯವನಾದ ರಾಮ ಪಣಿಕ್ಕರ್ನ ಸೋದರ ಮಾವಂದಿರೆಂದು, ರಾಮ ಪಣಿಕ್ಕರನ ಕೃತಿಗಳಲ್ಲಿ ಬರುವ ಕೆಲವು ಸೂಚನೆಗಳಿಂದ ಗೊತ್ತಾಗುತ್ತದೆ. ರಾಮ ಪಣಿಕ್ಕರನ ಮಾತಾಮಹನಾಗಿದ್ದು ಮಹಾಗುರುವರನಾಗಿ ಉಭಯಕವೀಶ್ವರನಾದ ಮಹಾತ್ಮನೆಂದು ಅವನಿಂದ ಪ್ರಕೀರ್ತಿತನಾದ ಕರುಣೇಶನ್ ಎಂಬ ಹಿರಿಯವನಿಂದಲೇ ಕಣಶ್ಯನ್ ಎಂಬ ಕುಟುಂಬ ಸಂಜ್ಞೆ ಬಂತೆಂದು ತಿಳಿಯಬಹುದು.

ಮಾಧವ ಪಣಿಕ್ಕರನ ಭಗವದ್ಗೀತೆ, ಶಂಕರ ಪಣಿಕ್ಕರನ ಭಾರತಮಾಲ, ರಾಮಪಣಿಕ್ಕರನ ರಾಮಾಯಣ, ಭಾರತ, ಭಾಗವತ, ಶಿವರಾತ್ರಿ ಮಹಾತ್ಮ್ಯಂ-ಎಂಬಿವೇ ಕಣಶ್ಯ ಕೃತಿಗಳಲ್ಲಿ ಪ್ರಮುಖವಾದುವು. ಭಾರತೀಯ ಭಾಷೆಗಳಲ್ಲಿ ಬಂದ ಭಗವದ್ಗೀತೆಯ ಮೊತ್ತ ಮೊದಲ ತರ್ಜುಮೆಗಳಲ್ಲಿ ಮಾಧವ ಪಣಿಕ್ಕರನದೂ ಒಂದೆಂಬುದನ್ನು ಗಮನಿಸಬೇಕು. ಈ ಕವಿತ್ರಯರಲ್ಲಿ ರಾಮ ಪಣಿಕ್ಕರ್ ಅತ್ಯಂತ ಶ್ರೇಷ್ಠ. ಆತ ರಚಿಸಿದ ರಾಮಾಯಣ ಮಲೆಯಾಳದ ಅತ್ಯುತ್ತಮ ಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಮಲೆಯಾಳದ ಆತ್ಮವನ್ನು ಚೆಂದಮಿಳ್ ಮತ್ತು ಸಂಸ್ಕೃತಗಳ ವಿಪರೀತ ಪರಿಣಾಮದಿಂದ ಬಿಡುಗಡೆಗೊಳಿಸಲು ಪ್ರಥಮ ದರ್ಜೆಯ ಪಂಡಿತ ಕವಿಗಳು ನಡೆಸಿದ ಬೋಧಪುರ್ವಕ ಪ್ರಯತ್ನದ ಮತ್ತೊಂದು ನಿರ್ಣಾಯಕ ಸಾಧನೆಯೇ ಈ ಕಣಶ್ಯ ಕೃತಿಗಳಾದುದರಿಂದ ಇವುಗಳ ಪ್ರಾಮುಖ್ಯ ಸ್ವಯಂವೇದ್ಯವಾಗಿದೆ.                                	(ಕೆ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ